ಪುರ್ವದಲ್ಲಿ ರಾಜರು ಜಲವಸತಿಯಿದ್ದ ಕೆಲವು ಪ್ರದೇಶಗಳಲ್ಲಿ ವಿಸ್ತಾರವಾದ ಹುಲ್ಲುಗಾವಲುಗಳನ್ನು ಬೆಳೆಸಿ ಅಲ್ಲಿ ತಮ್ಮ ಹಸುಗಳ ಮಂದೆಗಳನ್ನು ಮೇಯಲು ಬಿಟ್ಟು ಅವುಗಳ ಸಂರಕ್ಷಣೆಗಾಗಿ ಪಶುಪಾಲಕರನ್ನು ನೇಮಿಸುತ್ತಿದ್ದರು. ಇಂಥ ಗೊಲ್ಲರ ಆವಾಸಗಳಿಗೆ ಘೋಷಗಳೆಂದು ಹೆಸರು. ಆಗಾಗ ರಾಜರು ಅಥವಾ ಅವರ ನಂಬುಗೆಯ ಅಧಿಕಾರಿಗಳು, ಈ ಪಶುಸಂವರ್ಧನ ಕ್ಷೇತ್ರಗಳಿಗೆ ಹೋಗಿ ಹಸುಗಳನ್ನೂ ಕರುಗಳನ್ನೂ ಲೆಕ್ಕ ಮಾಡಿ ಗೊಲ್ಲರ ಕಷ್ಟಸುಖಗಳನ್ನು ವಿಚಾರಿಸಿ ಸೂಕ್ತ ವ್ಯವಸ್ಥೆ ಮಾಡುತ್ತಿದ್ದರು. ಇಂಥ ಭೇಟಿಗಳಿಗೆ ಘೋಷಯಾತ್ರೆ ಎಂದು ಹೆಸರು. ದುರ್ಯೋಧನ ಮಹಾರಾಜ ನಡೆಸಿದ ಒಂದು ಘೋಷಯಾತ್ರೆಯ ವೃತ್ತಾಂತ ಮಹಾಭಾರತದಲ್ಲಿ ಪ್ರಸಿದ್ಧವಾಗಿದೆ. ವನಪರ್ವದಲ್ಲಿ ಘೋಷಯಾತ್ರಾಪರ್ವ ಎಂಬ ಹೆಸರಿನಿಂದ 22 ಅಧ್ಯಾಯಗಳುಳ್ಳ ಒಂದು ಉಪಪರ್ವವೇ ಇದೆ.

ಪಾಂಡವರು ದ್ಯೂತಾಂತ್ಯದಲ್ಲಿ 22 ವರ್ಷಗಳ ಅರಣ್ಯವಾಸ ಮತ್ತು 1 ವರ್ಷದ ಅಜ್ಞಾತವಾಸದ ಪ್ರತಿಜ್ಞೆಗೆ ಕಟ್ಟುಬಿದ್ದು ದ್ವೈತವನದಲ್ಲಿ ವಾಸಿಸುತ್ತಿದ್ದಾಗ ಚಳಿಮಳೆ, ಗಾಳಿಬಿಸಿಲುಗಳಿಗೆ ಸಿಕ್ಕಿ ಕ್ಲೇಶಪಟ್ಟು ವಲ್ಕಲಧಾರಿಗಳಾಗಿ ಕಷ್ಟಪಡುತ್ತಿರುವ ಪಾಂಡವರ ದುಃಸ್ಥಿತಿಯನ್ನು ಕಣ್ಣಾರೆ ಕಂಡು ಅವರೆದುರಿಗೆ ತಮ್ಮ ರಾಜ್ಯೈಶ್ವರ್ಯದ ವೈಭವವನ್ನು ಮೆರೆದು ಅವರಿಗೂ ದ್ರೌಪದಿಗೂ ಮತ್ತಷ್ಟು ಸಂಕಟವುಂಟು ಮಾಡಬೇಕೆಂಬ ಅಪೇಕ್ಷೆ ದುರ್ಯೋಧನನ ದುರ್ಮಂತ್ರಿಗಳಾದ ಶಕುನಿ, ಕರ್ಣರಿಗೆ ಹುಟ್ಟಿತು. ಅವರು ತಮ್ಮ ಅಭಿಪ್ರಾಯವನ್ನು ದುರ್ಯೋಧನನಿಗೆ ಹೇಳಿಯೂ ಆಯಿತು. ಈ ಯೋಜನೆ ದುರ್ಯೋಧನನಿಗೂ ಪ್ರಿಯವಾದದ್ದೇ ಆಗಿದ್ದರೂ ಇದಕ್ಕೆ ಧೃತರಾಷ್ಟ್ರನ ಅನುಮತಿ ದೊರೆಯುವುದು ಅಸಂಭವವೆಂಬುದು ಅವನಿಗೆ ಗೊತ್ತಿತ್ತು. ಆಗ ಕರ್ಣನ ಮನಸ್ಸಿನಲ್ಲಿ ನಿರಾಕ್ಷೇಪಣೀಯವಾದ ಘೋಷಯಾತ್ರೆಯ ಯೋಚನೆ ಹೊಳೆಯಿತು. ದ್ವೈತವನದಲ್ಲಿಯೂ ಅದರ ಪರಿಸರಗಳಲ್ಲಿಯೂ ಕೆಲವು ಘೋಷಗಳಿದ್ದುವು. ಈ ವಿಚಾರ ಹೇಳಿದಾಗಲೂ ಅಂಧರಾಜ ದ್ವೈತವನದಲ್ಲಿ ಮಹಾರಥರಾದ ಪಾಂಡವರಿರುವುದರಿಂದ ಅಲ್ಲಿಗೆ ಕೌರವರು ಪರಿವಾರಸಮೇತರಾಗಿ ಹೋಗುವುದು ಕ್ಷೇಮಕರವಲ್ಲವೆಂದು ಆಕ್ಷೇಪಣೆಯನ್ನೇ ಒಡ್ಡಿದ. ಆಗ ಧೀಮಂತನಾದ ಶಕುನಿ ಸಮಯಪ್ರಜ್ಞೆಯನ್ನು ಮೆರೆದು ತಾವು ಯಾರೂ ಪಾಂಡವರಿರುವ ದಿಕ್ಕಿಗೆ ಹೋಗುವುದಿಲ್ಲವೆಂದು ಭರವಸೆ ನೀಡಿದ ಮೇಲೆ ಧೃತರಾಷ್ಟ್ರ ಘೋಷಯಾತ್ರೆಗೆ ಅನುಮತಿ ನೀಡಿದ. ಅಂಧರಾಜ ಅನುಮತಿ ನೀಡಿದ ಒಡನೆಯೇ ದುರ್ಯೋಧನ, ದುಶ್ಶಾಸನಾದಿ ಸೋದರರೊಡನೆ ಕರ್ಣಶಕುನಿಸಮೇತನಾಗಿ ದೊಡ್ಡ ಸೈನ್ಯವನ್ನು ಹೊರಡಿಸಿ ಅಂತಃಪುರದ ಸ್ತ್ರೀಜನರನ್ನೂ ಅವರ ಪರಿವಾರವನ್ನೂ ಜೊತೆಯಲ್ಲಿ ಕರೆದುಕೊಂಡು ಘೋಷಯಾತ್ರೆಯ ನೆಪದಲ್ಲಿ ಪಾಂಡವರಿಗೆ ಪೀಡೆಯನ್ನುಂಟುಮಾಡುವ ಏಕೈಕ ಮನೋರಥದಿಂದ ದ್ವೈತವನಕ್ಕೆ ಹೊರಟ. ಅವನ ಹಿಂದೆ ಅನೇಕ ಪೌರರೂ ವ್ಯಾಪಾರಿಗಳೂ ಇತರರೂ ಹೊರಟರು.
ದಾರಿಯಲ್ಲಿ ಕೌರವ ಹಲವು ಗೊಲ್ಲರ ಹಳ್ಳಿಗಳನ್ನು ಸಂದರ್ಶಿಸಿ ಗೊಲ್ಲರ ಗಾನ ನೃತ್ಯಗಳನ್ನು ನೋಡಿ ನಲಿದು ಅವರಿಗೆ ಯಥೋಚಿತವಾದ ಪಾರಿತೋಷಕಗಳನ್ನಿತ್ತು ದ್ವೈತವನವನ್ನು ಪ್ರವೇಶಿಸಿ ಪಾಂಡವರಿದ್ದ ಸ್ಥಳಕ್ಕೆ ಹತ್ತಿರದಲ್ಲಿಯೇ ಬೀಡು ಬಿಟ್ಟು ಪಾನ ಭೋಜನಾದಿಗಳಾದ ಮೇಲೆ ಗಾನ ನರ್ತನಗಳ ವ್ಯವಸ್ಥೆಯನ್ನೇ ಮಾಡಿದ. ವಿಹಾರಶೀಲರಾದ ಪೌರರು, ವೇಶ್ಯೆಯರು ಮೊದಲಾದವರು ವಿಶೇಷವಾದ ಕೋಲಾಹಲವನ್ನೇ ನಡೆಸಿದರು. ದ್ವೈತವನದ ಸರೋವರದ ಬಳಿ ಆ ವೇಳೆಗಾಗಲೇ ಬಂದು ಬಿಡಾರ ಮಾಡಿದ್ದ ಚಿತ್ರಸೇನನೆಂಬ ಗಂಧರ್ವನ ಪರಿವಾರದವರಿಗೂ ಕೌರವ ಸೈನಿಕರಿಗೂ ಘರ್ಷಣೆಯೇರ್ಪಟ್ಟು ಕೊನೆಗೆ ಅದು ಕದನದಲ್ಲಿ ಪರ್ಯವಸಾನಗೊಂಡಿತು. ದುರ್ಯೋಧನನ ಆಜ್ಞೆಯಂತೆ ಸಹಸ್ರಸಂಖ್ಯೆಯ ಸೈನಿಕರು ಗಂಧರ್ವರನ್ನು ಹಿಡಿದು ಮರ್ದಿಸತೊಡಗಿದರು. ಆಗ ಸ್ವಯಂ ಚಿತ್ರಸೇನನೇ ರಂಗಕ್ಕಿಳಿದು ಕಾಳಗವನ್ನಾರಂಭಿಸಲು ಕರ್ಣನಂಥ ಮಹಾವೀರರೂ ಅಂಜಿ ಆತುರದಿಂದ ವಿಕರ್ಣನ ರಥಕ್ಕೆ ಹಾರಿ ರಣರಂಗದಿಂದ ದಾಟಿಕೊಂಡ. ಗಂಧರ್ವರ ಹೊಡೆತಕ್ಕೆ ತಾಳಲಾರದೆ ಸಮಸ್ತ ಕೌರವಬಲವೂ ರಣರಂಗದಿಂದ ಪಲಾಯನ ಮಾಡತೊಡಗಿತು. ದುರ್ಯೋಧನ ಯುದ್ಧದಲ್ಲಿ ವಿರಥನಾಗಿ ನೆಲಕ್ಕೆ ಬಿದ್ದ. ಆಗ ಚಿತ್ರಸೇನನ ಅಪ್ಪಣೆಯಂತೆ ಗಂಧರ್ವರು ದುರ್ಯೋಧನ, ದುಶ್ಯಾಸನ ಮೊದಲಾದವರನ್ನೂ ಸಮಸ್ತ ರಾಜಪತ್ನಿಯರನ್ನೂ ಸೆರೆಹಿಡಿದು ಕರೆದೊಯ್ದರು. ಪಾಂಡವರಿಗೆ ಪೀಡೆಯಂಟುಮಾಡಲು ಹೊರಟವರಿಗೆ ಗಂಧರ್ವರಿಂದ ಪೀಡೆಯೊದಗಲು ಅದರ ಪರಿಹಾರಕ್ಕಾಗಿ ಕೌರವ ಪರಿವಾರದವರನೇಕರು ಪಾಂಡವರಲ್ಲಿಗೇ ಹೋಗಿ ಮೊರೆಯಿಡುವಂತಾಯಿತು.

ಕೌರವರಿಗೊದಗಿದ ಸಂಕಟವನ್ನು ಕೇಳಿದಾಗ ಭೀಮಸೇನನಿಗೆ ಅಂತಹ ದುಃಖವೇನೂ ಆಗಲಿಲ್ಲ. ನಾವೇ ಮಾಡಬೇಕಾದ ಕೆಲಸವನ್ನು ಗಂಧರ್ವರೇ ಮಾಡಿದರು. ಇದರಿಂದ ಲೋಕದಲ್ಲಿ ನಮಗೂ ಮಿತ್ರರಿದ್ದಾರೆಂದು ತಿಳಿದಂತಾಯಿತು-ಎಂದುಬಿಟ್ಟ. ಆದರೆ ಯಧಿಷ್ಠಿರ ಅದಕ್ಕೆ ಒಪ್ಪದೆ ತಮ್ಮ ಬಂಧುಗಳೂ ಅವರ ಹೆಂಡಿರೂ ಅನ್ಯರ ಸೆರೆಯಾಗಿರುವಾಗ ತಾವು ಸುಮ್ಮನಿರುವುದು ಸರಿಯಲ್ಲವೆಂದೂ, ಕೂಡಲೇ ಹೋಗಿ ಅವರನ್ನು ಬಿಡಿಸಬೇಕೆಂದೂ ಹೇಳಿ ತಮ್ಮಂದಿರನ್ನು ಒಪ್ಪಿಸಿ ಕಾಳಗಕ್ಕೆ ಹುರಿದುಂಬಿಸಿ ಕಳುಹಿಸಿದ. ದುರ್ಯೋಧನನ ರಥಗಳನ್ನೇ ಬಳಸಿಕೊಂಡು ಭೀಮಾರ್ಜುನ ಹಾಗೂ ನಕುಲಸಹದೇವರು ಗಂಧರ್ವರ ಮೇಲೆ ಕಾಳಗಹೂಡಿದರು. ಇವರ ಹೊಡೆತವನ್ನು ತಾಳಲಾರದೆ ಚಿತ್ರಸೇನ ಮಾಯಾ ಯುದ್ಧವನ್ನು ಆರಂಭಿಸಿದನಾದರೂ ಅರ್ಜುನನ ಶಬ್ಧವೇಧಿ ಬಾಣಗಳ ಮುಂದೆ ಅವನ ಆಟ ನಡೆಯದಾಯಿತು. ಆಗ ಚಿತ್ರಸೇನ ಅರ್ಜುನನ ಸಂಗಡ ಮಾತಿಗೆ ತೊಡಗಿ ದೇವೇಂದ್ರನ ಅಪ್ಪಣೆಯಂತೆ ಕೌರವರನ್ನೂ ಅವರ ಹೆಂಡಿರನ್ನೂ ಸೆರೆಹಿಡಿಯಲು ಬಂದೆನೆಂದು ಹೇಳಿ ಅದಕ್ಕೆ ಅವನು ಅಡ್ಡಿ ಬರಬಾರದೆಂದು ಸಲಹೆ ಮಾಡಿದ. ಪಾಪಿಗಳಾದ ಕೌರವರು ಬಿಡುಗಡೆಗೆ ಅರ್ಹರಲ್ಲವೆಂದೂ ಅವರಿಗೆ ಕನಿಕರ ತೋರಬಾರದೆಂದೂ ಚಿತ್ರಸೇನ ಹೇಳಿದರೂ ಲಕ್ಷಿಸದೆ ಧರ್ಮರಾಯನ ಇಚ್ಛೆಗನುಗುಣವಾಗಿ ಕೌರವರನ್ನೂ ಅವರ ಹೆಂಡಿರನ್ನೂ ಕೂಡಲೇ ಬಿಟ್ಟುಬಿಡಬೇಕೆಂದು ಅರ್ಜುನ ವಾದಿಸಿದ. ಆಗ ಚಿತ್ರಸೇನ ಬಂಧಿತರೆಲ್ಲರನ್ನೂ ಕರೆದುಕೊಂಡು ಧರ್ಮರಾಯನ ಬಳಿಗೆ ಬಂದು ನಡೆದ ವೃತ್ತಾಂತವನ್ನೆಲ್ಲ ಬಿನ್ನವಿಸಿದ.
ಧರ್ಮಪುತ್ರ ಚಿತ್ರಸೇನನ ಉಪಕಾರವನ್ನು ಮನ್ನಿಸಿ ಅವನ ಸ್ನೇಹಾಭಿಮಾನಗಳನ್ನು ಪ್ರಶಂಸೆ ಮಾಡಿ ಅವನನ್ನೂ ಅವರ ಪರಿವಾರವನ್ನೂ ಕಳುಹಿಸಿ ಕೊಟ್ಟು ಕೌರವರನ್ನೆಲ್ಲ ಬಿಡುಗಡೆ ಮಾಡಿ ಕೌರವನಿಗೆ ಬುದ್ಧಿ ಹೇಳಿ ಬೀಳ್ಕೊಟ್ಟ. ದುರ್ಯೋಧನ ಧರ್ಮಪುತ್ರನಿಗೆ ಪ್ರಣಾಮವನ್ನು ಮಾಡಿ ನಾಚಿಕೆಪಟ್ಟುಕೊಂಡು ಅಲ್ಲಿಂದ ಹೊರಟುಬಿಟ್ಟ. ಅವನು ಕೈಗೊಂಡ ಘೋಷಯಾತ್ರೆ ದುಸ್ಸಹವಾದ ಅಪಮಾನಕ್ಕೆ ಕಾರಣವಾಯಿತು. ಇದಕ್ಕೆ ಪ್ರೇರಕವಾದ ಕರ್ಣ ಕಾಳಗದಲ್ಲಿ ಸೋತು ಕಣದಿಂದ ಹಿಮ್ಮೆಟ್ಟಿದವ ನಡುದಾರಿಯಲ್ಲಿ ಬಂದು ದುರ್ಯೋಧನನೊಡನೆ ಸೇರಿಕೊಂಡ. ಚಿತ್ರಸೇನನ ದೆಸೆಯಿಂದಾದ ಪರಾಭವದ ವಾರ್ತೆ ಕೇಳಿ ಕರ್ಣನಿಗೂ ವ್ಯಥೆಯಾಯಿತು.

ಅಭಿಮಾನಧನನಾದ ಸುಯೋಧನ ಈ ಘೋರವಾದ ಪರಾಭವವನ್ನು ನುಂಗಿಕೊಂಡು ರಾಜಧಾನಿಗೆ ಹಿಂತಿರುಗಲು ಇಷ್ಟವಿಲ್ಲದೆ ವಿರಕ್ತನಾಗಿ ಪ್ರಾಯೋಪವೇಶ ಮಾಡಲು ನಿರ್ಧರಿಸಿದ. ಕರ್ಣಶಕುನಿಗಳು ಬಹುವಿಧವಾಗಿ ಸಮಾಧಾನ ಹೇಳಿದರೂ ಪ್ರಯೋಜನವಾಗಲಿಲ್ಲ. ಶತ್ರುಪರಾಜಿತನಾದ ತಾನು ಭೀಷ್ಮದ್ರೋಣಕೃಪಾದಿಗಳೆದುರಿಗೆ ನಿಲ್ಲಲು ಮನಸ್ಸೊಪ್ಪದೆ ದುರ್ಯೋಧನ ಅಪಮಾನದಿಂದ ಕುಗ್ಗಿ ಹೋಗಿ ಪ್ರಾಣತ್ಯಾಗಕ್ಕೆ ನಿರ್ಧರಿಸಿಕೊಂಡು ದರ್ಭಾಸನದ ಮೇಲೆ ಕುಳಿತು ನಿಶ್ಚೇಷ್ಟಿತನಾಗಿದ್ದುಬಿಟ್ಟ. ಆ ಸಮಯದಲ್ಲಿ ಹಿಂದೆ ದೇವೇಂದ್ರನಿಂದ ವಿಜಿತರಾಗಿದ್ದ ಅಸುರರು ಅಹಿ ಲೋಕದಲ್ಲಿರುತ್ತ ದುರ್ಯೋಧನನ ಸ್ಥಿತಿಯನ್ನು ಅರಿತು ಅವನನ್ನು ತಮ್ಮಲ್ಲಿಗೆ ಕರೆತರುವಂತೆ ಒಬ್ಬ ಕೃತ್ಯೆಯನ್ನು ಕಳುಹಿಸಿದರು. ಆಕೆ ಸುಯೋಧನನನ್ನು ರಸಾತಳಕ್ಕೆ ಎತ್ತಿಕೊಂಡು ಹೋಗಿ ಆ ದೈತ್ಯರಿಗೆ ಒಪ್ಪಿಸಿದಳು.

ಆ ದೈತ್ಯರು ದುರ್ಯೋಧನನನ್ನು ಪ್ರೀತಿಯಿಂದ ಸ್ವಾಗತಿಸಿ ಧೈರ್ಯ ಹೇಳುತ್ತ “ನೀನು ಭೂಮಿಯ ಮೇಲೆ ಹುಟ್ಟುತ್ತಲೇ ನಿನಗೆ ಸಹಾಯ ಮಾಡುವುದಕ್ಕೆಂದು ನಾನಾ ವಿಧ ದೈತ್ಯಗಣದವರು ರಾಜಕುಲಗಳಲ್ಲಿ ಹುಟ್ಟಿದ್ದಾರೆ. ಭಗದತ್ತನೇ ಮೊದಲಾದ ದೈತ್ಯ ವೀರರಂತೂ ಅರಿವಿಧ್ವಂಸಕರಾಗಿದ್ದಾರೆ. ನಿನಗೆ ಅರ್ಜುನನ ದೆಸೆಯಿಂದ ಭೀತಿಯಿರಬಹುದು. ಆದರೆ ಅಂಜಬೇಡ. ಕೇಳು, ಕೃಷ್ಣನಿಂದ ಸತ್ತ ನರಕಾಸುರನ ಅಂಶ ಕರ್ಣನನ್ನು ಹೊಕ್ಕಿದೆ. ಅವನು ಕೃಷ್ಣಾರ್ಜುನರ ಮೇಲೆ ಬದ್ಧವೈರನಾಗಿ ಹೋರಾಡುತ್ತಾನೆ, ಮುಂದಿನ ಯುದ್ಧದಲ್ಲಿ ನಿನಗೆ ಜಯ ಖಂಡಿತ” -ಎಂದು ಅಭಯ ನೀಡಿ ಆದರಪುರ್ವಕವಾಗಿ ಬೀಳ್ಕೊಟ್ಟರು. ಮತ್ತೆ ಕೃತ್ಯೆ ಸುಯೋಧನನನ್ನು ರಸಾತಳದಿಂದ ಹೊತ್ತು ತಂದು ಮೊದಲಿನ ಸ್ಥಾನದಲ್ಲಿ ಬಿಟ್ಟಳು.

ಇಷ್ಟೆಲ್ಲ ನಡೆಯುವ ವೇಳೆಗೆ ಬೆಳಗಾಯಿತು. ದುರ್ಯೋಧನ ಇದೆಲ್ಲ ಸ್ವಪ್ನದಲ್ಲಿ ನಡೆದುದೆಂದು ಭಾವಿಸಿ ಕುಳಿತಿರಲು ಕರ್ಣಶಕುನಿಗಳು ಮತ್ತೆ ಬಂದು ಅವನನ್ನು ಹಲವು ಬಗೆಯಿಂದ ಸಂತೈಸಿ ಹಸ್ತಿನಪುರಕ್ಕೆ ಕರೆದುಕೊಂಡು ಹೋದರು. ಮಾನಭಂಗಕ್ಕೆ ನೊಂದ ಸುಯೋಧನ ದೈತ್ಯರ ಪ್ರೋತ್ಸಾಹವಾಕ್ಯಗಳಿಂದಲೂ ಮುಂದೆ ಲಭಿಸಬಹುದಾದ ಅಂತ್ಯಜಯದ ಆಸೆಯಿಂದಲೂ ಜೀವ ಹಿಡಿದುಕೊಂಡು ರಾಜಧಾನಿಗೆ ಹಿಂತಿರುಗಿದ. (ಕೆ.ವಿ.ಇ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ